ಸಹನಾ ವಿಜಯಕುಮಾರ್ ಅವರ ‘ಕಶೀರ’ – ಪುಸ್ತಕ ಪರಿಚಯ

ವೈಶಾಲಿ ದಾಮ್ಲೆ

ವೈಶಾಲಿ ದಾಮ್ಲೆ 

ನನ್ನ ಹೆಸರು ವೈಶಾಲಿ ದಾಮ್ಲೆ. ಹುಟ್ಟಿ-ಬೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಬಳಿಯ ಸಣ್ಣ ಹಳ್ಳಿ ಅರಸಿನಮಕ್ಕಿಯಲ್ಲಿ. ಕಳೆದ ೧೨ ವರ್ಷಗಳಿಂದ ಮಾಂಚೆಸ್ಟರ್ ಹತ್ತಿರದ ಬೋಲ್ಟನ್ ನಲ್ಲಿ ವಾಸ. ವೃತ್ತಿಯಲ್ಲಿ ಸೈಕಿಯಾಟ್ರಿಸ್ಟ್. ಧಾತ್ರಿ, ಧೃತಿ ನನ್ನ ಮುದ್ದು ಮಕ್ಕಳು. ಕನ್ನಡ ಸಾಹಿತ್ಯ ಅಂದರೆ ವಿಶೇಷ ಒಲವು. ಸಮಯ ಸಿಕ್ಕಿದಾಗ ಮನದ ಭಾವನೆಗಳಿಗೆ ಅಕ್ಷರರೂಪ ಕೊಡುವುದು ಹವ್ಯಾಸ. ನನ್ನ ಕೆಲವೊಂದು ಬರಹಗಳು ಕನ್ನಡದ ನಿಯತಕಾಲಿಕಗಳು ಹಾಗೂ ಆನ್ ಲೈನ್ ಜಾಲಗಳಲ್ಲಿ ಪ್ರಕಟವಾಗಿವೆ.

ಸಹನಾ ವಿಜಯಕುಮಾರ್ ಅವರ ‘ಕಶೀರ’ ಕಾದಂಬರಿಯನ್ನು ಓದಿ ಮುಗಿಸಿದೆ. ದೇಶಾಭಿಮಾನವಿರುವ, ಕಾಶ್ಮೀರದಲ್ಲಿ ನಿಜಕ್ಕೂ ಏನಾಗುತ್ತಿದೆ ಎಂಬ ಸತ್ಯವನ್ನು ತಿಳಿಯುವ ಕುತೂಹಲವಿರುವ ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ ಪುಸ್ತಕ ಇದು. ಈ ಪುಸ್ತಕವನ್ನು ಕಾದಂಬರಿ ಅನ್ನುವುದಕ್ಕಿಂತಲೂ ಕಾಶ್ಮೀರದ ಬಗೆಗಿನ ಒಂದು ಗ್ರಂಥ ಎನ್ನಬಹುದೇನೋ. ಕಾಶ್ಮೀರ ಸಮಸ್ಯೆಯ ಸತ್ಯಾಸತ್ಯತೆಯನ್ನು ಅರಿತುಕೊಳ್ಳಲು ಹಾಗೂ ಅದನ್ನು ಓದುಗರಿಗೆ ತೋರಿಸಲು ಲೇಖಕಿಯು ಕೈಗೊಂಡ ಅಧ್ಯಯನ, ಕಾಶ್ಮೀರ ಕಣಿವೆಯ ಅತ್ಯಂತ ಅಪಾಯಕರ ಪ್ರದೇಶಗಳಲ್ಲಿ ಉಳಿದು, ಅಲ್ಲಿಯ ನಿವಾಸಿಗಳನ್ನು ಸಂದರ್ಶಿಸಿ ಕಾಶ್ಮೀರ ಸಮಸ್ಯೆಯ ವಸ್ತುಸ್ಥಿತಿಯನ್ನು ತಿಳಿದುಕೊಳ್ಳಲು ಅವರು ಪಟ್ಟ ಸಾಹಸ ನಿಜಕ್ಕೂ ಅಭಿನಂದನಾರ್ಹ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಇಂತಹ ಸೂಕ್ಷ್ಮ ವಿಚಾರವೊಂದನ್ನು ಎತ್ತಿಕೊಂಡು, ಸತ್ಯವನ್ನು ಒಂದಷ್ಟೂ ತಿರುಚದೆ, ನಿರ್ಭಿಡೆಯಿಂದ ಕಾದಂಬರಿ ಬರೆಯುವುದೆಂದರೆ ಸಣ್ಣ ಮಾತಲ್ಲ. ಸಹನಾರ ಅಧ್ಯಯನಶೀಲತೆ ಹಾಗೂ ಬರವಣಿಗೆಯ ಶೈಲಿ ಎರಡರಲ್ಲೂ ಭೈರಪ್ಪನವರ ಛಾಪು ಕಂಡುಬಂದದ್ದು ನನಗೊಬ್ಬಳಿಗೇ ಇರಲಿಕ್ಕಿಲ್ಲ. ಸಾಹಿತ್ಯಬ್ರಹ್ಮ ಭೈರಪ್ಪನವರಿಗೆ ಇಂತಹ ಸಮರ್ಥ ಸಾಹಿತ್ಯಿಕ ಉತ್ತರಾಧಿಕಾರಿ ದೊರೆತದ್ದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಚಾರ.

ಸರಸ್ವತಿಯ ನೆಲೆವೀಡಾದ, ಜ್ಞಾನೋಪಾಸನೆಯ ಕೇಂದ್ರವಾಗಿದ್ದ ಕಾಶ್ಮೀರವು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥದಿಂದಾಗಿ, ದೂರಾಲೋಚನೆಯ ಕೊರತೆಯಿಂದಾಗಿ, ನರಕಸದೃಶವಾಗಿರುವುದು ಇಪ್ಪತ್ತು ಹಾಗೂ ಇಪ್ಪತ್ತೊಂದನೆಯ ಶತಮಾನದ ಬಹುದೊಡ್ಡ ದುರಂತವೇ ಸರಿ. ಕಾಶ್ಮೀರ ಸಮಸ್ಯೆಯ ರಾಜಕೀಯ ಹಿನ್ನೆಲೆಯನ್ನು, ಅಲ್ಲಿ ಇಸ್ಲಾಮ್ ಮೂಲಭೂತವಾದ ಹೆಡೆಯೆತ್ತಿದ್ದನ್ನು, ಅದು ಕ್ರಮೇಣ ಕಶ್ಮೀರಿ ಪಂಡಿತರ ಮಾರಣಹೋಮಕ್ಕೆ ಕಾರಣವಾದದ್ದನ್ನು ಲೇಖಕಿ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತಾರೆ. ರಾಜಕೀಯದ ವಿಷಯದಲ್ಲಿ ಧರ್ಮದ ಹಸ್ತಕ್ಷೇಪವಾದರೆ ಆಗುವ ದುರಂತ ಎಂಥದ್ದು ಎಂಬುದಕ್ಕೆ ಇಂದಿನ ಕಾಶ್ಮೀರವೇ ಜ್ವಲಂತ ಸಾಕ್ಷಿ.

ಇಸ್ಲಾಮ್ ಮೂಲಭೂತವಾದದ ಪ್ರಭಾವಕ್ಕೊಳಗಾಗಿ, ತನಗೆ ಪಾಠ ಕಲಿಸಿದ ಪಂಡಿತರ ಮಗನನ್ನು ಬರ್ಬರ ಹತ್ಯೆಗೈದು, ಅವರ ಮಗಳನ್ನು ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಿ, ಆಕೆಯ ದೇಹವನ್ನು ತುಂಡರಿಸಿ ಝೇಲಂ ನದಿಗೆಸೆಯುವ ಆಸಿಫ್, ಈ ಪೈಶಾಚಿಕ ಕ್ರೌರ್ಯಕ್ಕೆ ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡು, ಜೀವಚ್ಛವವಾಗಿ ಬದುಕುವ ಕೈಲಾಶ್ ಪಂಡಿತ್, ಇನ್ನೂ ಮೀಸೆ ಚಿಗುರುತ್ತಿರುವ ಮುಸ್ಲಿಂ ಯುವಕರನ್ನು ಕುರಾನ್ ನ ಹೆಸರಿನಲ್ಲಿ ಭಯೋತ್ಪಾದನೆಯತ್ತ ಸೆಳೆಯುವ ಮುಫ್ತಿ ಲತೀಫ್, ಮತಾಂಧತೆಯ ಬೇಲಿಯನ್ನು ದಾಟಿ, ಕಾಶ್ಮೀರ ಸಮಸ್ಯೆಯ ನಿಜಸ್ವರೂಪವನ್ನು ಅರ್ಥೈಸಿಕೊಳ್ಳುವ, ಅಲ್ಲಿ ಹಿಂದೂಗಳಿಗಾಗುವ ಅನ್ಯಾಯಕ್ಕೆ ಕೊರಗುವ ಸಲೀಂ, ಅತ್ತ ಮೂಲಭೂತವಾದವನ್ನೂ ತೊರೆಯಲಾರದೆ, ಇತ್ತ ತಮ್ಮ ಹೃದಯದ ಕರೆಗೂ ಓಗೊಡಲಾಗದೆ ನೈತಿಕತೆಯ ದ್ವಂದ್ವದಲ್ಲೇ ಬದುಕು ಸವೆಸುವ ಬಷೀರ್ ಅಹಮದ್, ಒಂದು ಕಾಲದಲ್ಲಿ ರಾಜ-ರಾಣಿಯರಂತೆ ಕಾಶ್ಮೀರದ ಬಹು ಅಂತಸ್ತಿನ ಬಂಗಲೆಯಲ್ಲಿ ವಾಸಿಸುತ್ತಿದ್ದ, ೧೯೯೦ ರ ಪಂಡಿತರ ಮಾರಣಹೋಮದಲ್ಲಿ ಜಮ್ಮುವಿಗೆ ವಲಸೆ ಬಂದು ಅಲ್ಲಿನ ಒಂದು ಕೊಠಡಿಯ ಮನೆಯಲ್ಲಿ ತುಂಬುಕುಟುಂಬದೊಂದಿಗೆ ಜೀವಿಸುತ್ತಾ, ದಾಂಪತ್ಯ ಸುಖವನ್ನೇ ಮರೆತು ಜೀವನ ಸವೆಸುವ ಸಂಜೀವ್ ಮತ್ತು ಆರತಿ ಕೌಲ್ ಇವರೆಲ್ಲರೂ ಕೇವಲ ಕಾದಂಬರಿಯ ಪಾತ್ರಗಳಲ್ಲ, ಕಾಶ್ಮೀರದಲ್ಲಿ ನಡೆದು ಹೋದ, ನಡೆಯುತ್ತಿರುವ ಹಿಂಸಾಕಾಂಡದ ನೈಜ ಮುಖಗಳು. ಅದೇರೀತಿ, ಕಾಶ್ಮೀರ ಸಮಸ್ಯೆಯ ಸತ್ಯಾಸತ್ಯತೆಯ ಅರಿವಾಗಲೀ, ಅದನ್ನು ವಿಮರ್ಶಿಸುವ ಬೌದ್ಧಿಕ/ ನೈತಿಕ ಯೋಗ್ಯತೆಯಾಗಲೀ ಇರದೇ ಇದ್ದರೂ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂದೂ, ಅಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದೂ ಬೊಬ್ಬಿಡುವ, ಧರಣಿ ಕೂರುವ ಬುದ್ಧಿಜೀವಿಗಳ ಪ್ರತಿನಿಧಿಯಾಗಿ ಮೀರಾದೇವಿ ಹಾಗೂ ಸುಂದರಕೃಷ್ಣರ ಪಾತ್ರಗಳಿವೆ. ನಮ್ಮ ಅಖಂಡ ಭಾರತದ ಭೂಭಾಗವೇ ಆಗಿರುವ, ಭಾರತಮಾತೆಗೆ ಮುಕುಟಸದೃಶವಾಗಿರುವ ಕಾಶ್ಮೀರಕ್ಕೂ, ಕಾಶ್ಮೀರಿಗಳಿಗೂ ಆದ ಅನ್ಯಾಯ ನಮಗೆಲ್ಲರಿಗೂ ಆದ ಅನ್ಯಾಯವೇ. ಅದನ್ನು ಮನಗಂಡು ದೇಶವಾಸಿಗಳೆಲ್ಲರೂ ಕಾಶ್ಮೀರಿಗಳ ಪರ ನಿಲ್ಲಬೇಕು, ಸತ್ಯದ ಪರ ಹೋರಾಡಬೇಕು ಎಂಬ ಸಂದೇಶ ಕೊಡುತ್ತದೆ ಕಾದಂಬರಿಯ ನಾಯಕ ನರೇಂದ್ರರ ಪಾತ್ರ.

ಕಾಶ್ಮೀರ ಸಮಸ್ಯೆಯಂತಹ ಜಟಿಲವಾದ ವಿಷಯವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸಹನಾರವರು ಹಂತಹಂತವಾಗಿ ವಿವರಿಸಿದ ರೀತಿ ಬಹಳ ಇಷ್ಟವಾಯಿತು. ರಾಜಕೀಯ ಸಮಸ್ಯೆಯೊಂದಕ್ಕೆ ಮತಾಂಧತೆಯ ಇಂಬು ದೊರೆತು ಇಡೀ ಕಾಶ್ಮೀರವೇ ಸುಟ್ಟು ಬೂದಿಯಾಗುತ್ತಿರುವ ಬಗೆಯನ್ನು ಓದಿದಾಗ ಮನಸ್ಸು ವಿಹ್ವಲವಾಗದಿರದು. ಪಂಡಿತರ ಮಗಳು ಸವಿತಾಳನ್ನು ಮತಾಂಧ ಪಿಶಾಚಿಗಳು ಅಪಹರಿಸಿ, ಅತ್ಯಾಚಾರಗೈದು, ಹತ್ಯೆಗೈದ ಭಾಗವನ್ನು ಓದಿದ ಮೇಲೆ ಎರಡು ರಾತ್ರೆಗಳ ಕಾಲ ನಿದ್ದೆ ಬರದೇ ಹೊರಳಾಡಿದ್ದೆ.

ಈ ಇಸ್ಲಾಮ್ ಮೂಲಭೂತವಾದದ ಸಮಸ್ಯೆ ದೂರದ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವವೇ ಮತಾಂಧತೆಯ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದೆ. ಮುಸ್ಲಿಮರೆಲ್ಲಾ ಕೆಟ್ಟವರೆಂಬುದು ಖಂಡಿತಾ ಸರಿಯಲ್ಲ. ಆದರೆ ಬಹಳಷ್ಟು ಮುಗ್ಧ ಮುಸ್ಲಿಂ ಯುವಕ ಯುವತಿಯರು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದೂ ಸುಳ್ಳಲ್ಲ. ನಿಜವಾದ ದೇಶಪ್ರೇಮಿಗಳಾದವರು, ಅಲ್ಪಸಂಖ್ಯಾತರ ಓಲೈಕೆಯೆಂಬ ಪರದೆಯ ಹಿಂದೆ ಅಡಗಿಕೊಳ್ಳದೆ, ಸಮಸ್ಯೆಯ ಮೂಲವನ್ನರಿತು, ಸತ್ಯಾಂಶವನ್ನು ಜನರಿಗೆ ತಿಳಿಸುವ, ಮೂಲಭೂತವಾದದ ಅಪಾಯಗಳನ್ನು ಬೆಳೆಯುವ ಮನಸ್ಸುಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಶೀಘ್ರವೇ ಮಾಡಬೇಕಾಗಿದೆ. ಈ ಕೆಲಸದಲ್ಲಿ, ಕಾದಂಬರಿಯಲ್ಲಿ ಬರುವ ಪಾತ್ರಗಳಾದ ಸಲೀಂ ಹಾಗೂ ಮುಷ್ತಾಕ್ ನಂತಹ ಮುಸ್ಲಿಂ ಯುವಕರನ್ನು ಸಂಘಟಿಸಬೇಕಾದ ಅವಶ್ಯಕತೆಯಿದೆ. ಜಾತಿ, ಮತ, ಧರ್ಮ, ಭಾಷೆ ಹಾಗೂ ರಾಜ್ಯಗಳ ಎಲ್ಲೆಯನ್ನು ಮೀರಿ ನಾವೆಲ್ಲರೂ ರಾಷ್ಟ್ರಹಿತಕ್ಕಾಗಿ ಒಂದಾಗಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಇಂತಹ ಒಂದು ಪ್ರಬುದ್ಧ ಕಾದಂಬರಿಯನ್ನು ಕನ್ನಡದ ಓದುಗರ ಕೈಗಿಡಲು ಸಹನಾ ಅವರು ಪಟ್ಟ ಶ್ರಮಕ್ಕೆ, ಅವರ ಅಧ್ಯನಶೀಲತೆಗೆ ಹ್ಯಾಟ್ಸ್ ಆಫ್. ನೀವೂ ಓದಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
– ವೈಶಾಲಿ ದಾಮ್ಲೆ
ಬೋಲ್ಟನ್, ಯುಕೆ

KAHO ಗೆ ಮುನ್ನುಡಿ ಬರೆದ ಚಕ್ರವರ್ತಿ

ಸ್ವಾಮಿ ವಿವೇಕಾನಂದ ಅವರ ಚಿಕಾಗೊ ಭಾಷಣದ ೧೨೫ ವಾರ್ಷಿಕೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ December ೧ ರಂದು ನಡೆದ KAHO ಕಾರ್ಯಕ್ರಮ ಆಂಗ್ಲನಾಡಿನಲ್ಲಿ ಹಿಂದುಗಳನೆಲ್ಲ ಒಕ್ಕೋಡಿಸಿ ಭಾವೈಕ್ಯತೆಯ ಜ್ಯೋತಿ ಬೆಳಗಿದ ದಿವಸ . ವಾರಾಂತ್ಯದಲ್ಲಿ ನಡೆದ ಈ ಕಾರ್ಯಕ್ರಮ ಅಲ್ಲಿ ನೆರೆದವರ ನೆನಪಿನಲ್ಲಿ ನೆಲೆ ನಿಲ್ಲುವುದಂತೂ ಖಚಿತ. ಬಹುದಿನಗಳಿಂದ ಇಂಥದ್ದೊಂದು ಬಹು ಮೌಲ್ಯವಾದ ಹಿಂದುತ್ವದ ಅರಿವು ಮೂಡಿಸುವ ಚಟುವಟಿಕೆಯ ಉತ್ಕಟವಾದ ಬಯಕೆಯು ಅಲ್ಲಿ ನೆರೆದವರಲ್ಲಿ ಕ್ಕಂಡುಬಂದಿದ್ದಂತೂ ಸತ್ಯ.
ಸಾಮರಸ್ಸ್ಯದ ನವ್ಯ ಯುಗಕೆ ನಿಮಗಿದು ಆಮಂತ್ರಣ, ಆಹಾ ಎಷ್ಟು ಸೊಗಸಾದ ಸಾಲು, ಅಕಿಲೇಶ್ ಅವರ ಗಾಯನದಿಂದ ಪ್ರಾರಂಭವಾದ ಕಾರ್ಯಕ್ರಮ ನಮ್ಮಲ್ಲೊಂದು ನವ ಚೇತನವನ್ನು ಮೂಡಿಸಿತು . ನಂತರದ ಕಹೋ( ಕನ್ನಡದ ಅನಿವಾಸಿ ಹಿಂದೂಗಳ ಒಕ್ಕೂಟ )ದ launch ಬರಿ ಉದ್ಘಾಟನೆ ಮಾತ್ರವೇ ಆಗಿರಲಿಲ್ಲ, ಅಲ್ಲಿ ನೆರೆದವರ ಮನದಲ್ಲಿ ಹಿಂದುತ್ವದ ಸಂಘರ್ಷವೇ ಆಗಿತ್ತು .
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದವರು ಚಕ್ರವರ್ತಿ ಸೂಲಿಬೆಲೆಯವರು ಅವರದ್ದೊಂದು ಸ್ವಚ್ಛ ಹೃದಯ, ಧಿಟ್ಟ ಹೆಜ್ಜೆ, ದೃಢ ನಿಲುವು , ಅವರೊಬ್ಬ ಜಾಗೃತ ನಾಗರೀಕ. ಎಲ್ಲೋ ಒಂದುಕಡೆ ದೇಶಾಭಿಮಾನ ರಾಷ್ತ್ರೀಯ ಭಾವೈಕ್ಯತೆ ಮತ್ತು ಹಿಂದುತ್ವ ಎಂದರೆ ಮೊದಲು ನೆನಪಾಗುವ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ. ಹೆಸರಿಗೆ ತಕ್ಕಂತೆ ಅವರು ಉತ್ತಮ ಸಮಾಜಕ್ಕೊಂದು ಸುಧರ್ಶನ ಚಕ್ರವೇ ಸರಿ. ಅವರನ್ನು ವೇದಿಕೆ ಮೇಲೆ ನೋಡಿದರೆ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳನ್ನೊಳಗೊಂಡ ಪುಸ್ತಕಗಳ ಭಂಡಾರವನ್ನೇ ನೋಡಿದಂತೆ ಅನ್ನಿಸುತಿತ್ತು ಹಾಗು KAHO launch ಲಿ ಅವರು ಮಾಡಿದ ಭಾಷಣ KAHO ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದಂತ್ತಿತ್ತು. ಅವರು ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಭಾಷಣದ ಮೆಲುಕು ಹಾಕುತ್ತಿದ್ದರೆ ನಮ್ಮ ಕಣ್ಮುಂದೆ ವಿವೇಕಾನಂದ ಅವರೇ ಭಾಷಣ ಮಾಡಿದಂತೆ ಭಾಸವಾಗುತ್ತಿತ್ತು ಹಾಗು ಚಿಕಾಗೋ ಭಾಷಣದ ಪೂರ್ಣ ಚಿತ್ರಣವೇ ಕಣ್ಮುಂದೆ ಬಂದಂತಿತ್ತು.
ಇಂತಹ ಅದಮ್ಯ ಚೇತನರ ಧಾರ್ಮಿಕ ನಿಲುವುಗಳನ್ನು ಅವರ ಗಟ್ಟಿ ಧ್ವನಿಯಲ್ಲಿ ಕೇಳಿದ ನಾವೇ ಧನ್ಯರು. ಹೀಗೆ ಸಾಮಾಜಿಕ ಮತ್ತು ಧಾರ್ಮಿಕ ಚರ್ಚೆಗಳಿಂದ ಯುವ ಜನರನ್ನು ಉತ್ತೇಜಿಸುವ ಅವರ ಸ್ಪಷ್ಟ ಭಾಷೆ ಮತ್ತು ವಿಭಿನ್ನ ಮಾತಿನ ಶೈಲಿ ಶ್ಲಾಗನೀಯ. ಅಂತ್ಯದಲ್ಲಿ ನಮ್ಮಲ್ಲಿರುವ ಹಲವಾರು ಗೊಂದಲಗಳಿಗೆ , ಪ್ರಶೆಗಳಿಗೆ ಅವರು ಕೊಟ್ಟ ಉತ್ತರಗಳು ಬಹುತೇಕವಾಗಿ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳನ್ನು ಆಧಾರಿಸಿದ್ದರಿಂದ ಉತ್ತರ ಸಿಕ್ಕ ತೃಪ್ತಿ ಜನರ ಚಪ್ಪಾಳೆಯಲ್ಲಿ ಕಾಣುತಿತ್ತು, ಹೀಗೆ ಉತ್ತರಿಸಿದ ಅವರ ಕ್ರಿಯಾಶೀಲತೆಗೆ ಮತ್ತು ಅವರ ತಾಳ್ಮೆಗೆ ನಾನು ಕೈ ಮುಗಿದು ನಮಿಸುವೆ.
ಹೀಗೆ ಚಕ್ರವರ್ತಿ ಯವರ ಭಾಷಣ , ಅವರೊಂದಿಗೆ ನಡೆದ ಸಾಮಾಜಿಕ-ಧಾರ್ಮಿಕ ಚರ್ಚೆಗಳು , ಚಪ್ಪಾಳೆಯ ಸದ್ದು ಎಲ್ಲೋ ಒಂದುಕಡೆ KAHO ಸಂಸ್ಥೆಯ ಜವಾಬ್ಧಾರಿಯನ್ನು ಹೆಚ್ಚಿಸಿತ್ತು. ಅಂತ್ಯದಲ್ಲಿ ಚಕ್ರವರ್ತಿ ಯವರೊಂದಿಗೆ ವೇದಿಕೆಯನ್ನು ಹಂಚಿಕೊಂಡು ” ವಂದೇ ಮಾತರಂ ” ಗೀತೆಯನ್ನು ಹಾಡಿದ ನಾವೇ ಧನ್ಯರು. ಆ ಸುವರ್ಣ ಅವಕಾಶಕ್ಕೆ KAHO ಸಂಸ್ಥೆಗೆ ನನ್ನ ತುಂಬು ಹೃದಯದ ಧನ್ಯವಾದಗಳು.
KAHO ಸಂಸ್ಥೆಯ ನಿಲುವುಗಳು ಸ್ವಾಮಿ ವಿವೇಕಾನಂದ ಅವರ ಚಿಂತನೆಗಳ ಅಡಿಯಲ್ಲಿ ಇನ್ನಷ್ಟು ದೃಢವಾಗಲಿ. ಹಿಂದುತ್ವವನ್ನು ಸಾರುವ ಧರ್ಮಪರ ಚಟುವಟಿಕೆಗಳು ಮತ್ತಷ್ಟು ನಡೆಯಲಿ ಎಂದು ಹಾರೈಸುತ್ತೇನೆ ಹಾಗು ನನ್ನಂತೆ ಹಲವರು ನಿಮ್ಮ ಈ ಕೆಲಸಕ್ಕೆ ಕೈ ಜೋಡಿಸಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ.
ಜೈ ಹಿಂದ್ ಜೈ ಕರ್ನಾಟಕ ಮಾತೆ
ಶೋಭಾ ಸಾಗರ್

ಕಹೋ – ಸ್ವಾಮಿ ವಿವೇಕಾನಂದರ ಜೀವನ ದರ್ಶನ ಚಕ್ರವರ್ತಿ ಸೂಲಿಬೆಲೆಯಿಂದ

Audience in London

ಸ್ವಾಮಿ ವಿವೇಕಾನಂದ ಅವರ ಚಿಕಾಗೊ ನಲ್ಲಿ ನೀಡಿದ ಪ್ರಖ್ಯಾತ ಭಾಷಣದ ೧೨೫ ನೇ ವರ್ಷದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿತ್ತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಕರ್ನಾಟಕದುದ್ದ ತಮ್ಮ ನೇರ ನುಡಿ, ಯುವ ಜನತೆಯಲ್ಲಿ ದೇಶ ಪ್ರೇಮದ ಬೀಜ ಬಿತ್ತುವ ಭಾಷಣದಿಂದ ಎಲ್ಲರ ಗಮನ ಸೆಳೆಯುತ್ತಿದ್ದುದು ನಿಜ ಆದರೆ ೨೦೧೨ ರಲ್ಲಿ ನಾನು ಕಲಿತ ಜವಾಹರ ನವೋದಯ ವಿದ್ಯಾಲಯ, ಉತ್ತರ ಕನ್ನಡ ಶಾಲೆಯ ಬೆಳ್ಳಿ ಮಹೋತ್ಸವದ ದಿನ ಅವರು ನೀಡಿದ ಭಾಷಣ ಕೇಳಿದ್ದು ಬಿಟ್ಟರೆ ನಾನು ಅಷ್ಟೇನೂ ನಿಕಟವಾಗಿ ಅವರ ವೀಡಿಯೋಸ್ ಅಥವಾ ಪತ್ರಿಕಾ ಮಾದ್ಯಮದಲ್ಲಿ ವಿಶೇಷವಾಗಿ ಅನುಸರಿಸುತ್ತಾ ಇರಲಿಲ್ಲ. ಹೀಗಾಗಿ ಕಹೋ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಹಾಗೂ ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಕೇಳುವ ಕುತೂಹಲ ನನ್ನಲ್ಲಿ ಸಾಕಷ್ಠಿತ್ತು. ಹಲವಾರು ಲಂಡನ್ ಕನ್ನಡಿಗರು ಅವರನ್ನು ಕೇಳುವ ಕುತೂಹಲದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಭಾವಿಸಿರುತ್ತೇನೆ.
ಚಕ್ರವರ್ತಿ ಸೂಲಿಬೆಲೆ ಅವರನ್ನು ಸಭಾಂಗಣದತ್ತ ಬರಮಾಡಿಕೊಳ್ಳಲು ಮಿತ್ರರಾದ ಸಂತೋಷ್ ಪಾಟೀಲ್ ಕೇಳಿದಾಗ ಹೂ ಅಂದೆ… ಚಕ್ರವರ್ತಿ ಅವರು ಕಾರ್ ನಿಂದ ಇಳಿದಾದಮೇಲೆ, ನಾನು ಗಣಪತಿ ಭಟ್ ಎಂದು ಸ್ವ – ಪರಿಚಯ ಮಾಡಿ ಕೊಡುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ.

ಯು.ಕೆ. ಕನ್ನಡ ಸಮೂದಾಯ ಮೊನ್ನೆ ತಾನೇ ದುರಾದ್ರಷ್ಟದಿಂದ ಕಳೆದುಕೊಂಡ ಪವನ್ ಮೈಸೂರ್ ಅವರಿಗೆ ಶ್ರದ್ದಾಂಜಲಿ ಹಾಗೂ ಮೌನಾಚರಣೆಯ ಮೂಲಕ ಕಾರ್ಯಕ್ರಮ ಶುರುವಾಯಿತು. ದಿನದ ಸಂಪೂರ್ಣ ಕಾರ್ಯಕ್ರಮವನ್ನು ರಾಹುಲ್ ಹಾಗೂ ರಂಗನಾಯಕಿ ನೆರವೇರಿಸಿ ಕೊಟ್ಟರು. ಸಾಮರಸ್ಯದ ನವ್ಯ ಯುಗಕ್ಕೆ ನಿಮಗಿದೋ ಆಮಂತ್ರಣ ಎಂಬ ಸುಂದರ ಹಾಡಿನೊಂದಿಗೆ ಕಾರ್ಯಕ್ರಮ ಮುಂದುವರೆದು, ಸ್ವಾಗತ ಭಾಷಣ, ಅತಿಥಿಗಳಿಂದ ದೀಪ ಹಚ್ಚುವ ಕಾರ್ಯಕ್ರಮ ಹಾಗೂ ಕಹೋ (ಕರುನಾಡಿನ ಅನಿವಾಸಿಗಳ ಹಿಂದೂ ಒಕ್ಕೂಟ) ದ ಅಧಿಕೃತ ಘೋಷಣೆಯೊಂದಿಗೆ ಚಕ್ರವರ್ತಿ ಸೂಲಿಬೆಲೆಯವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಅನಿವಾಸಿ ಪದದ ಗುಣಗಾನದಿಂದ ಚಕ್ರವರ್ತಿ ಸೂಲಿಬೆಲೆ ತಮ್ಮ ಭಾಷಣವನ್ನು ಶುರು ಮಾಡಿದರು. ಅ ವಿನಾಶಿ ಹಿಂದುಗಳ ಸಂಘಟನೆಯಾಗಿ ಕಹೊ (KAHO) ವಿಜ್ರಂಭಿಸಲಿ ಎಂದು ಹಾರೈಸಿದರು. ಸ್ವಾಮಿ ವಿವೇಕಾನಂದರ ಬಗ್ಗೆ ಚಿಕ್ಕವನಿರುವಾಗ ಶಾಲೆಯಲ್ಲಿ ಓದಿದ್ದು ಬಿಟ್ಟರೆ ವಿಕಿಪೀಡಿಯದಲ್ಲಿ ಹೆಚ್ಚಿನದಾಗಿ ಸರ್ಚ್ ಮಾಡಿ ತಿಳಿದಿರುವಂತಹ ವಿಷಯ. ಆದರೆ ಚಕ್ರವರ್ತಿ ಸೂಲಿಬೆಲೆ ಸ್ವಾಮಿ ವಿವೇಕಾನಂದರ ಆರಂಭಿಕ ಜೀವನದಿಂದ ಹಿಡಿದು ಅವರ ಪ್ರತಿಯೊಂದು ಹೆಜ್ಜೆ, ಮಾತು ನುಡಿಯನ್ನು ಆಳವಾಗಿ ಸಂಶೋಧನೆ ಮಾಡಿ, ಕಲಿಯುಗದಲ್ಲಿ ನಾವು ಹಿಂದೂ ಧರ್ಮವನ್ನು ಹೇಗೆ ನಿಭಾಯಿಸಬೇಕು ಎಂಬ ಮಹತ್ವವನ್ನು ಅವರ ವಾಕ್ ಚಾತುರ್ಯದಿಂದ ಎಲ್ಲರಿಗೂ ಅರಿವು ಮಾಡಿಕೊಟ್ಟಿದ್ದು ಅವರ ಭಾಷಣದ ವಿಶೇಷತೆ. ಸುಮಾರು ಒಂದೂವರೆ ಘಂಟೆ ನಡೆದ ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಉಪಸ್ಥಿತರಿದ್ದ ಎಲ್ಲಾ ಕನ್ನಡಿಗರೂ ಮೂಕ ಮಗ್ನರಾಗಿ ಆಲಿಸಿದರು.

Balagokulam Children Session

ಅವರ ಭಾಷಣದ ಒಂದು ವಿಚಾರ ನನ್ನನ್ನು ಸರಿಯಾಗಿ ತಟ್ಟಿತು. ಅದೇನೆಂದರೆ “ನಿನ್ನನ್ನು ನೀನು ತಿಳಿಕೊಂಡರೆ ಜಗತ್ತಿನಲ್ಲಿ ಮತ್ತೇನೂ ತಿಳಿದುಕೊಳ್ಳುವ ಅಗತ್ಯವಿಲ್ಲ” ಹೀಗಾಗಿ ಸ್ವಾಮಿ ವಿವೇಕಾನಂದರು ಚಿಕ್ಕವರಿವಾಗಲೇ ಈ ಚಿಂತನೆ ಅವರಿಗೆ ಬಹಳ ಬೇಗ ಬಂತು ಎಂದು ನಮಗೆಲ್ಲ ಅರಿವು ಮಾಡಿಕೊಟ್ಟಿದ್ದು ಸೂಕ್ತವಾಗಿತ್ತು. ಇದರ ಬಗ್ಗೆ ವಿಶ್ಲೇಷಣೆ ಮಾಡಿ ತಕ್ಕ ಉದಾಹರಣೆ ಕೊಟ್ಟು ಚಕ್ರವರ್ತಿ ಸೂಲಿಬೆಲೆಯವರು ಸುಂದರವಾಗಿ ಎಲ್ಲರಲ್ಲೂ ವಿವೇಕಾನಂದರ ಆದರ್ಶ ಹಾಗೂ ಅವರ ದೇಶ ಭಕ್ತಿಯ ಬಗ್ಗೆ  ಅರಿವು ಮಾಡಿಕೊಟ್ಟರು. ಹಿಂದೂ ಧರ್ಮದ ಬಗ್ಗೆ ಇತ್ತೀಚಿಗೆ ಅನುಕೂಲಕ್ಕೆ ತಕ್ಕಂತೆ ತಮ್ಮ ಹುಚ್ಚು ರಾಜಕಾರಣಕ್ಕೆ ಉಪಯೋಗಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ನಾವು Asertive ಆಗಿರಬೇಕು ಎಂಬುದರ ಬಗ್ಗೆ ಅರಿವು ಮಾಡಿಕೊಟ್ಟಿದ್ದು ಶ್ಲಾಘನೀಯ. ಪ್ರೇಕ್ಷಕರ ಸಾಕಷ್ಟು ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರ ನೀಡಿದ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮ ಮುಗಿದು, ತಿಂಡಿ ಉಪಚಾರ ಮುಗಿದು, ಸಭಾಂಗಣದ ಬಾಗಿಲು ಮುಚ್ಚುವವರೆಗೂ ಜನರು ತಮ್ಮನ್ನು ಹಿಂಬಾಲಿಸಿ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸಿದರು.
ಶೋಭಾ ಸಾಗರ್ ಹಾಗೂ ತಂಡದಿಂದ ವಂದೇ ಮಾತರಂ ಗೀತೆಯೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮ, ಮುಂದೆ ಇಂತಹ ಬೌದ್ಧಿಕ ವಿಷಯಗಳ ಮೇಲೆ ಇನ್ನಷ್ಟು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಆಯೋಜಕರನ್ನು ಉತ್ತೇಜಿಸುವದಂತೂ ಖಚಿತ.
ಕಾರ್ಯಕ್ರಮದ ಯಶಸ್ಸಿಗೆ ಒಟ್ಟೊಗೂಡಿದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಪ್ರಯೋಜಕರಿಗೆ ನನ್ನ ಧನ್ಯವಾದವನ್ನು ಕೋರಿ ಮುಂದೆ ಕೂಡ ಹೀಗೆಯೇ ಉತ್ತಮ ಚಿಂತಕರಿಂದ ಯು.ಕೆ ಯಲ್ಲಿ ನೆಲೆಸಿರುವ ಕನ್ನಡಿಗರಗೆ ಕೇಳುವ ಅವಕಾಶ ದೊರೆಯಲಿ ಎಂದು ಆಶಿಸುವೆ.

Article by Gana Bhat, United Kingdom

http://www.ganabhat.com

ಕಹೋ ಯುಕೆ – ಚಕ್ರವರ್ತಿ ಸೂಲಿಬೆಲೆ ಯಾಕೆ?

ಯುನೈಟೆಡ್ ಕಿಂಗ್ಡಮ್ ನ ನಾಲ್ಕು ಮುಖ್ಯ ನಗರಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಚಿಕಾಗೊ ನಲ್ಲಿ ನೀಡಿದ ಪ್ರಖ್ಯಾತ ಭಾಷಣದ ೧೨೫ ನೇ ಶತಮಾನದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ನಾವೆಲ್ಲ ಹೆಚ್ಚಿನದಾಗಿ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ಕಹೋ (ಕರುನಾಡಿನ ಅನಿವಾಸಿ ಹಿಂದೂಗಳ ಒಕ್ಕೂಟ) ಎಂಬ ಫಲಕದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೆ ಈ ಕಹೋ ಎಂಬುದು ಏನು? ನನಗೆ ತಿಳಿದಿರುವಂತೆ ಸ್ವಲ್ಪ ವರ್ಷದ ಹಿಂದೆ ಉಠೋ (UTHO ) ಎಂಬ ತೆಲಗು ತಂಡ ಶುರುವಾಗಿತ್ತು… ಯುನೈಟೆಡ್ ಕಿಂಗ್ಡಮ್ ತೆಲಗು ಹಿಂದೂ ಆರ್ಗನೈಜೇಷನ್ ಎಂದು ಸ್ಥಾಪಿಸಲ್ಪಟ್ಟ ಈ ತಂಡ ಹಲವಾರು ಪ್ರೇರಣಾಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆಯಂತೆ. ಪ್ರಪಂಚದಾದ್ಯಂತ ಇರುವ ಕನ್ನಡಿಗರು ಹಲವಾರು ಸಂಘವನ್ನು ವಿದೇಶದಲ್ಲಿ ಸ್ಥಾಪಿಸಿ ಕನ್ನಡ ಭಾಷೆಯನ್ನೇ ಪ್ರಾಮುಖ್ಯವಾಗಿಟ್ಟು ಇಲ್ಲಿಯವರೆಗೆ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವದನ್ನ ನಾವು ನೋಡಿದ್ದೇವೆ. ಈ ಮದ್ಯೆ, ಕರುನಾಡಿನ ಅನಿವಾಸಿ ಹಿಂದೂಗಳ ಒಕ್ಕೂಟ ಎಂಬ ಆಲೋಚನೆಯೊಂದಿಗೆ ಯುಕೆ ಯಲ್ಲಿರುವ NRI ಕನ್ನಡಿಗರು ಕಹೋ ಯುಕೆ ಎಂಬ ಗುರುತಿನೊಂದಿಗೆ ಈಗ ಹೊರ ಬಂದಿದ್ದಾರೆ. ಕರುನಾಡಿನ ಅನಿವಾಸಿ ಹಿಂದೂ ಏಕೆ ಎಂದು ನನ್ನೊಂದಿಗೆ ನಾನೇ ಕೇಳಿದಾಗ ನನ್ನಲ್ಲಿಯೇ ಉತ್ತರ ದೊರಕಿರುವದು ಒಂದು ಹೆಮ್ಮೆಯ ಸಂಗತಿ. ಯಾಕೆಂದರೆ, ಹಿಂದೂ ಅಥವಾ ಹಿಂದೂಯಿಸಂ ಒಂದು ಧರ್ಮ ಅಥವಾ ಜೀವನದ ಪದ್ಧತಿ (way of Life). Love for the whole of humanity regardless of race, country, nationality, religion, sect, faith, caste or creed ಎಂಬ ಸಿದ್ದಾಂತದೊಂದಿಗೆ ನಾವು ಹಿಂದೂ ಎಂದು ನಮ್ಮ ಪರಿವಾರದಲ್ಲಿ, ಅಥವಾ ದೇವಸ್ಥಾನದಲ್ಲಿ ಅಥವಾ ಹಬ್ಬ ಹರಿದಿನಕ್ಕಷ್ಟೇ ಸೀಮಿತವಾಗಿಟ್ಟರೆ ಉಪಯೋಗವೇನು? ಹೀಗಾಗಿ ಕರ್ನಾಟಕದಿಂದ ಬಂದಂತಹ ಹಿಂದೂ ಅನಿವಾಸಿಗಳಿಗೆ ಹಲವಾರು ಬೌದ್ಧಿಕ ವಿಷಯಗಳ ಮೇಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇಂತಹ ವೇದಿಕೆ ಅಗತ್ಯವಿತ್ತು ಎಂಬುದು ನನ್ನ ಅಭಿಪ್ರಾಯ. ಭಾಷಾ ಕೇಂದ್ರಿತವಾದ ಕನ್ನಡ ಸಂಘಗಳ ಚಟುವಟಿಕೆಗಳಿಗೂ ಹಾಗೂ ಕಹೋ ಹಮ್ಮಿಕೊಂಡಿರುವ ಚಟುವಟಿಕೆಗಳಿಗೂ ವ್ಯತ್ಸಾಸವಿದೆ ಎಂಬುದು ನನ್ನ ಅನಿಸಿಕೆ.

ಸ್ವಾಮಿ ವಿವೇಕಾನಂದರು ೧೮೯೩ ರಲ್ಲೇ ಅಮೆರಿಕಕ್ಕೆ ಹೋಗಿ ಹಿಂದೂಯಿಸಂ ಬಗ್ಗೆ ಪ್ರಖ್ಯಾತ ಭಾಷಣ ಮಾಡಿ ವಿಶ್ವ ಜನತೆಗೆ ಹಿಂದೂ ಧರ್ಮದ ಪರಿಚಯ ಮಾಡಿ ಕೊಟ್ಟರು. ಕರುನಾಡಿನಿಂದ ಸಾವಿರಾರು ಮೈಲಿ ವಲಸೆ ಬಂದಿರುವ ನಾವು ನಮ್ಮ ಧರ್ಮವನ್ನು ಗರ್ವದಿಂದ ಪ್ರಚಾರ ಮಾಡದಿದ್ದಲ್ಲಿ, ಹಿಂದೂ ಧರ್ಮದ ವಿಶೇಷತೆ ವಿಶ್ವಕ್ಕೆ ತಿಳಿಯುವದಾದರೂ ಹೇಗೆ?
ಈ ನಿಟ್ಟಿನಲ್ಲಿ ಕಹೋ (ಕರುನಾಡಿನ ಅನಿವಾಸಿ ಹಿಂದೂಗಳ ಒಕ್ಕೂಟ) ಎಂಬ ಬ್ಯಾನರ್ ನೊಂದಿಗೆ ಸ್ವಾಮಿ ವಿವೇಕಾನಂದ ಅವರ ಚಿಕಾಗೊ ನಲ್ಲಿ ನೀಡಿದ ಪ್ರಖ್ಯಾತ ಭಾಷಣದ ೧೨೫ ನೇ ಶತಮಾನದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮ ಒಂದು ಸಂತಸದ ಸಂಗತಿ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕದಾತ್ಯಂತ ಖ್ಯಾತಿ ಪಡೆದಿರುವ ಬರಹಗಾರರೂ, ವಾಕ್ ಚಾತುರ್ಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಬರುತ್ತಿರುವದು ಒಂದು ವಿಶೇಷ ಸಂಗತಿ. ಚಕ್ರವರ್ತಿ ಸೂಲಿಬೆಲೆ ಅವರು ಕರ್ನಾಟಕದ ಹೊನ್ನಾವರ ತಾಲೂಕಿನಲ್ಲಿ ಹುಟ್ಟಿದವರು. ವಿಜಯವಾಣಿ ದಿನಪತ್ರಿಕೆಯಲ್ಲಿ ವಿಶ್ವ ಗುರು ಎಂಬ ಅಂಕಣದ ಮೂಲಕ ಪ್ರಖ್ಯಾತಿ ಪಡೆದಿದ್ದಲ್ಲದೇ, ಯುವ ಬ್ರಿಗೇಡ್ ಎಂಬ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಹಲವಾರು ಟಿವಿ ಮಾದ್ಯಮದಲ್ಲಿ ಇವರ ಹೆಸರು ಚಿರಪರಿಚಿತ. ತಮ್ಮ ನೇರ ಮಾತಿನಿಂದ ಜನರಲ್ಲಿ ರಾಷ್ಟ್ರ ಪ್ರೇಮದ ಬಗ್ಗೆ ಸದಾ ಸ್ಫೂರ್ತಿ ತುಂಬುತ್ತಿರುವ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಸ್ವಯಂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿರುವಂತರವರು. ಇಂತಹ ವ್ಯಕ್ತಿ ಕರುನಾಡಿನ ಅನಿವಾಸಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವದು ಒಂದು ವಿಶೇಷ ಮೈಲಿಗಲ್ಲು ಎನ್ನಬಹುದು.
ಮೊನ್ನೆ ನಮ್ ರೇಡಿಯೋ ಸಂದರ್ಶನದಲ್ಲಿ ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ಅವರು ಹೇಳಿದ್ದು ಹೀಗೆ.
“ಜಗತ್ತು ಭಾರತವನ್ನು ನೋಡುವಂತ ದ್ರಷ್ಟಿಕೋನವನ್ನ, ಜಗತ್ತು ಹಿಂದೂ ಧರ್ಮವನ್ನು ನೋಡುವಂತ ದೃಷ್ಟಿಕೋಣವನ್ನ, ಭಾರತ ತನ್ನ ತಾನೇ ನೋಡಿಕೊಳ್ಳುವಂತ ದೃಷ್ಟಿಕೋಣವನ್ನ, ಇವೆಲ್ಲವನ್ನೂ ತಮ್ಮ ಮೂರುವರೆ ನಿಮಷದ ಭಾಷಣದ ಮೂಲಕ ಸ್ವಾಮಿ ವಿವೇಕಾನಂದರು ಬಸಲಾಯಿಸಿಬಿಟ್ಟರು. ಇಡೀ ಜಗತ್ತಿನಲ್ಲಿ ಯಾವುದಾದರೂ ಒಂದು ಭಾಷಣದ ೧೨೫ನೇ ವರ್ಷದ ಆಚರಣೆ ನಡೆದಿದೆ ಅಂತಂದ್ರೆ ಅದು ಚಿಕಾಗೋದ ವಿವೇಕಾನಂದರ ಭಾಷಣ ಮಾತ್ರ, ಅದೇ ಈ ಭಾಷಣದ ಮಹತ್ವ ಏನಂತ ಹೇಳಿಬಿಡೊತ್ತೆ. ಈ ಹಿನ್ನಲೆಯಲ್ಲಿ ನನಗನಿಸುವದೇನಂದ್ರೆ, ಯುಕೆ ಯಲ್ಲಿ ಎಲ್ಲಾ ಕನ್ನಡದ ಮಿತ್ರರು ಸೇರಿಕೊಂಡು ಈ ಭಾಷಣದ ೧೨೫ ನೇ ವರ್ಷಾಚರಣೆಯನ್ನ ಆಚರಿಸಬೇಕಂತಿದ್ದಾರೆ, ಅದು ವಿವೇಕಾನಂದರಿಗೆ ಏನೋ ಉಪಕಾರ ಮಾಡಿದಂತಾಗಲ್ಲ ಬದಲಿಗೆ ನಮ್ಮನ್ನ ನಾವೇ ಹೆಮ್ಮೆಯಿಂದ ಜಗತ್ತಿನ ಮುಂದೆ ಪುನರ್ಪ್ರತಿಷ್ಠಾಪಿಸಿಕೊಂಡಂತೆ ಅಂತ ಇದನ್ನ ಭಾವಿಸಿ ನಾನಿದನ್ನ ಆಚರಣೆ ಮಾಡಲು ಪ್ರಯತ್ನಪಟ್ಟಂತ ಎಲ್ಲಾ ಕನ್ನಡದ ಮಿತ್ರರಿಗೂ ವಿಶೇಷ ಅಭಿನಂದನೆ ಸಲ್ಲಿಸಲಿಕ್ಕೆ ಇಷ್ಟಪಡುತ್ತೇನೆ.”

ಈ ಭಾಷಣದ ಪ್ರಾಮುಖ್ಯತೆ ಅಥವಾ ಪ್ರಭಾವ ಈಗಿನ ಪೀಳಿಗೆಯ ಮೇಲೆ ಯಾವ ರೀತಿ ಬೀಳೋತ್ತೆ ಎಂದು ಕೇಳಿದಾಗ, ಚಕ್ರವರ್ತಿ ಸೂಲಿಬೆಲೆ ಹೇಳಿದ್ದು,
“ಒಂದು ಆತ್ಮವಿಶ್ವಾಸ ಎಂಬುದು ಯಾವತ್ತಿಗೂ ಬೇಕು, ಭಾರತದಿಂದ ಯುಕೆಗೆ ಹೋಗುವಂತ ಹುಡುಗನಿಗೆ ನಾನು ಭಾರತದಿಂದ ಬಂದಿದೀನಿ ಎಂಬ ಅಭಿಮಾನ ಸ್ವಾಮಿ ವಿವೇಕಾನಂದರ ಭಾಷಣ ೧೦೦ ಪಟ್ಟು ಹೆಚ್ಚಿಸಿದೆ. ಸ್ವಾಮಿ ವಿವೇಕಾನಂದರು ನನ್ನ ಭಾರತ ಎಷ್ಟು ಅದ್ಬುತ ಎಂದು ಅಮೇರಿಕಾ ಹಾಗೂ ವಿಶ್ವದ ಮುಂದೆ ಹೇಗೆ ಪ್ರೆಸೆಂಟ್ ಮಾಡಿದ್ದರು ಅಂದ್ರೆ ಅದು ಅಂದು ಅಮೇಜಿಂಗ್ ಅಂತ ಹೇಳಬೋಹುದು. ಅವತ್ತಿನ ದಿನ ಅಷ್ಟೊಂದು ಅಭಿಮಾನ ಅಂದ್ರೆ ಇವತ್ತಿನ ದಿನ ಭಾರತ ಎಲ್ಲಾ ಕ್ಷೇತ್ರದಲ್ಲೂ ಅಗ್ರ ಸ್ಥಾನದಲ್ಲಿದೆ, ಹೀಗಿರುವಾಗ ನಮ್ಮಲ್ಲಿ ಅದಕ್ಕಿಂತ ೧೦೦ ಪಟ್ಟು ಅಭಿಮಾನ ಇರಬೇಕು ಅನ್ನಿಸೊತ್ತೆ”

ಈ ಒಂದು ಕಾರ್ಯಕ್ರಮದ ಬಗ್ಗೆ ಯಾವ ರೀತಿಯ ಸಂದೇಶವನ್ನು ಕೊಡಲಿಕ್ಕೆ ಇಷ್ಟಪಡ್ತೀರಿ ಎಂದು ಚಕ್ರವರ್ತಿ ಸೂಲಿಬೆಲೆ ಅವರ ಕೇಳಿದಾಗ ಅವರು ಹೇಳಿದ್ದು ಹೀಗೆ,
“ಸ್ವಾಮಿ ವಿವೇಕಾನಂದ ಅವರು ನಮ್ಮ ಕಾಲದ ಋಷಿ, ನೋಡಲಿಕ್ಕೆ ಸಂತರಂತೆ ಕಾಣಿಸುತ್ತಿದ್ದರು ಆದರೆ ಭಾರತವನ್ನು ಹಾಗೂ ಭಾರತದ ಧರ್ಮವನ್ನು ಕಾಪಾಡಿಕೊಳ್ಳಲು ಬಂದಂತಹ ಯೋಧನೂ ಕೂಡ, ಸ್ವಾಮಿ ವಿವೇಕಾನಂದ ಒಂದು ವಿಜ್ಞಾನಿಯನ್ನೂ ಕೂಡ ಪ್ರಚೋದಿಸುವ ಸಾಮರ್ಥ್ಯವುಳ್ಳವರು, ಸ್ವಾಮಿ ವಿವೇಕಾನಂದರು ಒಬ್ಬ ಸೋಶಿಯಲ್ ರೆಫಾರ್ಮೆರ್, ಒಬ್ಬ spiritual Gaint , ಸ್ವಾಮಿ ವಿವೇಕಾನಂದರು ಎಲ್ಲಾ ಬಗೆಯ ಶಕ್ತಿಯನ್ನ ನಮ್ಮೊಳಗೆ ಪ್ರೇರೇಪಿಸುವ ಸಾಮರ್ಥ್ಯ ಉಳ್ಳವರು ಹೀಗಾಗಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನ ಹಾಗೂ ಭಾರತದ ಚಿಂತನೆಗಳನ್ನ ಮನಸ್ಸಿಟ್ಟು ಕೇಳುವಂತಹ, ಆಲೋಚನೆ ಮಾಡುವಂತಹ ಅವಕಾಶವನ್ನ ಪಡಕೋತೀವಿ, ದಯಮಾಡಿ ಬನ್ನಿ, ನನಗೂ ಕೂಡ ಈ ಕಾರ್ಯಕ್ರಮದ ಮೂಲಕ ಯುಕೆ ಕನ್ನಡಿಗರನ್ನ ಮಾತಾಡಿಸುವ ಒಂದು ಸೂಕ್ತವಾದ ಸಂದರ್ಭ. ನಾವೆಲ್ಲರೂ ಸೇರೋಣ, ಸ್ವಾಮಿ ವಿವೇಕಾನಂದರ ಭಾಷಣದ ೧೨೫ ನೇ ವರ್ಷದ ಸಂದರ್ಭದಲ್ಲಿ ಅವರ ಚಿಂತನೆಗಳನ್ನು cherish ಮಾಡೋಣ”

ಸರಳ ಜೀವಿ ಹಾಗೂ ಅತ್ಯುತ್ತಮ ಭಾಷಣಗಾರ ಶ್ರೀ ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಗಳಾಗಿ ಬರುತ್ತಿರುವದು ಹೆಮ್ಮೆಯ ಸಂಗತಿ. ಕರುನಾಡಿನ ಅನಿವಾಸಿ ಜನತೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಂಡನ್, ಮ್ಯಾಂಚೆಸ್ಟರ್, Edinburgh ಹಾಗೂ Newcastle ಗೆ  ಬಂದು ಭಾಗವಹಿಸಿ ಎಂದು ಕೋರಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಕೊಳ್ಳಲು ಈ ಕೆಳಗಿನ ಅಂತರ್ಜಲ ಪುಟವನ್ನು ಭೇಟಿ ಕೊಡಿ.
http://kahouk.org

Article by Gana Bhat, United Kingdom

http://www.ganabhat.com