ಸಹನಾ ವಿಜಯಕುಮಾರ್ ಅವರ ‘ಕಶೀರ’ – ಪುಸ್ತಕ ಪರಿಚಯ

ವೈಶಾಲಿ ದಾಮ್ಲೆ

ವೈಶಾಲಿ ದಾಮ್ಲೆ 

ನನ್ನ ಹೆಸರು ವೈಶಾಲಿ ದಾಮ್ಲೆ. ಹುಟ್ಟಿ-ಬೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಬಳಿಯ ಸಣ್ಣ ಹಳ್ಳಿ ಅರಸಿನಮಕ್ಕಿಯಲ್ಲಿ. ಕಳೆದ ೧೨ ವರ್ಷಗಳಿಂದ ಮಾಂಚೆಸ್ಟರ್ ಹತ್ತಿರದ ಬೋಲ್ಟನ್ ನಲ್ಲಿ ವಾಸ. ವೃತ್ತಿಯಲ್ಲಿ ಸೈಕಿಯಾಟ್ರಿಸ್ಟ್. ಧಾತ್ರಿ, ಧೃತಿ ನನ್ನ ಮುದ್ದು ಮಕ್ಕಳು. ಕನ್ನಡ ಸಾಹಿತ್ಯ ಅಂದರೆ ವಿಶೇಷ ಒಲವು. ಸಮಯ ಸಿಕ್ಕಿದಾಗ ಮನದ ಭಾವನೆಗಳಿಗೆ ಅಕ್ಷರರೂಪ ಕೊಡುವುದು ಹವ್ಯಾಸ. ನನ್ನ ಕೆಲವೊಂದು ಬರಹಗಳು ಕನ್ನಡದ ನಿಯತಕಾಲಿಕಗಳು ಹಾಗೂ ಆನ್ ಲೈನ್ ಜಾಲಗಳಲ್ಲಿ ಪ್ರಕಟವಾಗಿವೆ.

ಸಹನಾ ವಿಜಯಕುಮಾರ್ ಅವರ ‘ಕಶೀರ’ ಕಾದಂಬರಿಯನ್ನು ಓದಿ ಮುಗಿಸಿದೆ. ದೇಶಾಭಿಮಾನವಿರುವ, ಕಾಶ್ಮೀರದಲ್ಲಿ ನಿಜಕ್ಕೂ ಏನಾಗುತ್ತಿದೆ ಎಂಬ ಸತ್ಯವನ್ನು ತಿಳಿಯುವ ಕುತೂಹಲವಿರುವ ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ ಪುಸ್ತಕ ಇದು. ಈ ಪುಸ್ತಕವನ್ನು ಕಾದಂಬರಿ ಅನ್ನುವುದಕ್ಕಿಂತಲೂ ಕಾಶ್ಮೀರದ ಬಗೆಗಿನ ಒಂದು ಗ್ರಂಥ ಎನ್ನಬಹುದೇನೋ. ಕಾಶ್ಮೀರ ಸಮಸ್ಯೆಯ ಸತ್ಯಾಸತ್ಯತೆಯನ್ನು ಅರಿತುಕೊಳ್ಳಲು ಹಾಗೂ ಅದನ್ನು ಓದುಗರಿಗೆ ತೋರಿಸಲು ಲೇಖಕಿಯು ಕೈಗೊಂಡ ಅಧ್ಯಯನ, ಕಾಶ್ಮೀರ ಕಣಿವೆಯ ಅತ್ಯಂತ ಅಪಾಯಕರ ಪ್ರದೇಶಗಳಲ್ಲಿ ಉಳಿದು, ಅಲ್ಲಿಯ ನಿವಾಸಿಗಳನ್ನು ಸಂದರ್ಶಿಸಿ ಕಾಶ್ಮೀರ ಸಮಸ್ಯೆಯ ವಸ್ತುಸ್ಥಿತಿಯನ್ನು ತಿಳಿದುಕೊಳ್ಳಲು ಅವರು ಪಟ್ಟ ಸಾಹಸ ನಿಜಕ್ಕೂ ಅಭಿನಂದನಾರ್ಹ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಇಂತಹ ಸೂಕ್ಷ್ಮ ವಿಚಾರವೊಂದನ್ನು ಎತ್ತಿಕೊಂಡು, ಸತ್ಯವನ್ನು ಒಂದಷ್ಟೂ ತಿರುಚದೆ, ನಿರ್ಭಿಡೆಯಿಂದ ಕಾದಂಬರಿ ಬರೆಯುವುದೆಂದರೆ ಸಣ್ಣ ಮಾತಲ್ಲ. ಸಹನಾರ ಅಧ್ಯಯನಶೀಲತೆ ಹಾಗೂ ಬರವಣಿಗೆಯ ಶೈಲಿ ಎರಡರಲ್ಲೂ ಭೈರಪ್ಪನವರ ಛಾಪು ಕಂಡುಬಂದದ್ದು ನನಗೊಬ್ಬಳಿಗೇ ಇರಲಿಕ್ಕಿಲ್ಲ. ಸಾಹಿತ್ಯಬ್ರಹ್ಮ ಭೈರಪ್ಪನವರಿಗೆ ಇಂತಹ ಸಮರ್ಥ ಸಾಹಿತ್ಯಿಕ ಉತ್ತರಾಧಿಕಾರಿ ದೊರೆತದ್ದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಚಾರ.

ಸರಸ್ವತಿಯ ನೆಲೆವೀಡಾದ, ಜ್ಞಾನೋಪಾಸನೆಯ ಕೇಂದ್ರವಾಗಿದ್ದ ಕಾಶ್ಮೀರವು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥದಿಂದಾಗಿ, ದೂರಾಲೋಚನೆಯ ಕೊರತೆಯಿಂದಾಗಿ, ನರಕಸದೃಶವಾಗಿರುವುದು ಇಪ್ಪತ್ತು ಹಾಗೂ ಇಪ್ಪತ್ತೊಂದನೆಯ ಶತಮಾನದ ಬಹುದೊಡ್ಡ ದುರಂತವೇ ಸರಿ. ಕಾಶ್ಮೀರ ಸಮಸ್ಯೆಯ ರಾಜಕೀಯ ಹಿನ್ನೆಲೆಯನ್ನು, ಅಲ್ಲಿ ಇಸ್ಲಾಮ್ ಮೂಲಭೂತವಾದ ಹೆಡೆಯೆತ್ತಿದ್ದನ್ನು, ಅದು ಕ್ರಮೇಣ ಕಶ್ಮೀರಿ ಪಂಡಿತರ ಮಾರಣಹೋಮಕ್ಕೆ ಕಾರಣವಾದದ್ದನ್ನು ಲೇಖಕಿ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತಾರೆ. ರಾಜಕೀಯದ ವಿಷಯದಲ್ಲಿ ಧರ್ಮದ ಹಸ್ತಕ್ಷೇಪವಾದರೆ ಆಗುವ ದುರಂತ ಎಂಥದ್ದು ಎಂಬುದಕ್ಕೆ ಇಂದಿನ ಕಾಶ್ಮೀರವೇ ಜ್ವಲಂತ ಸಾಕ್ಷಿ.

ಇಸ್ಲಾಮ್ ಮೂಲಭೂತವಾದದ ಪ್ರಭಾವಕ್ಕೊಳಗಾಗಿ, ತನಗೆ ಪಾಠ ಕಲಿಸಿದ ಪಂಡಿತರ ಮಗನನ್ನು ಬರ್ಬರ ಹತ್ಯೆಗೈದು, ಅವರ ಮಗಳನ್ನು ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಿ, ಆಕೆಯ ದೇಹವನ್ನು ತುಂಡರಿಸಿ ಝೇಲಂ ನದಿಗೆಸೆಯುವ ಆಸಿಫ್, ಈ ಪೈಶಾಚಿಕ ಕ್ರೌರ್ಯಕ್ಕೆ ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡು, ಜೀವಚ್ಛವವಾಗಿ ಬದುಕುವ ಕೈಲಾಶ್ ಪಂಡಿತ್, ಇನ್ನೂ ಮೀಸೆ ಚಿಗುರುತ್ತಿರುವ ಮುಸ್ಲಿಂ ಯುವಕರನ್ನು ಕುರಾನ್ ನ ಹೆಸರಿನಲ್ಲಿ ಭಯೋತ್ಪಾದನೆಯತ್ತ ಸೆಳೆಯುವ ಮುಫ್ತಿ ಲತೀಫ್, ಮತಾಂಧತೆಯ ಬೇಲಿಯನ್ನು ದಾಟಿ, ಕಾಶ್ಮೀರ ಸಮಸ್ಯೆಯ ನಿಜಸ್ವರೂಪವನ್ನು ಅರ್ಥೈಸಿಕೊಳ್ಳುವ, ಅಲ್ಲಿ ಹಿಂದೂಗಳಿಗಾಗುವ ಅನ್ಯಾಯಕ್ಕೆ ಕೊರಗುವ ಸಲೀಂ, ಅತ್ತ ಮೂಲಭೂತವಾದವನ್ನೂ ತೊರೆಯಲಾರದೆ, ಇತ್ತ ತಮ್ಮ ಹೃದಯದ ಕರೆಗೂ ಓಗೊಡಲಾಗದೆ ನೈತಿಕತೆಯ ದ್ವಂದ್ವದಲ್ಲೇ ಬದುಕು ಸವೆಸುವ ಬಷೀರ್ ಅಹಮದ್, ಒಂದು ಕಾಲದಲ್ಲಿ ರಾಜ-ರಾಣಿಯರಂತೆ ಕಾಶ್ಮೀರದ ಬಹು ಅಂತಸ್ತಿನ ಬಂಗಲೆಯಲ್ಲಿ ವಾಸಿಸುತ್ತಿದ್ದ, ೧೯೯೦ ರ ಪಂಡಿತರ ಮಾರಣಹೋಮದಲ್ಲಿ ಜಮ್ಮುವಿಗೆ ವಲಸೆ ಬಂದು ಅಲ್ಲಿನ ಒಂದು ಕೊಠಡಿಯ ಮನೆಯಲ್ಲಿ ತುಂಬುಕುಟುಂಬದೊಂದಿಗೆ ಜೀವಿಸುತ್ತಾ, ದಾಂಪತ್ಯ ಸುಖವನ್ನೇ ಮರೆತು ಜೀವನ ಸವೆಸುವ ಸಂಜೀವ್ ಮತ್ತು ಆರತಿ ಕೌಲ್ ಇವರೆಲ್ಲರೂ ಕೇವಲ ಕಾದಂಬರಿಯ ಪಾತ್ರಗಳಲ್ಲ, ಕಾಶ್ಮೀರದಲ್ಲಿ ನಡೆದು ಹೋದ, ನಡೆಯುತ್ತಿರುವ ಹಿಂಸಾಕಾಂಡದ ನೈಜ ಮುಖಗಳು. ಅದೇರೀತಿ, ಕಾಶ್ಮೀರ ಸಮಸ್ಯೆಯ ಸತ್ಯಾಸತ್ಯತೆಯ ಅರಿವಾಗಲೀ, ಅದನ್ನು ವಿಮರ್ಶಿಸುವ ಬೌದ್ಧಿಕ/ ನೈತಿಕ ಯೋಗ್ಯತೆಯಾಗಲೀ ಇರದೇ ಇದ್ದರೂ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂದೂ, ಅಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದೂ ಬೊಬ್ಬಿಡುವ, ಧರಣಿ ಕೂರುವ ಬುದ್ಧಿಜೀವಿಗಳ ಪ್ರತಿನಿಧಿಯಾಗಿ ಮೀರಾದೇವಿ ಹಾಗೂ ಸುಂದರಕೃಷ್ಣರ ಪಾತ್ರಗಳಿವೆ. ನಮ್ಮ ಅಖಂಡ ಭಾರತದ ಭೂಭಾಗವೇ ಆಗಿರುವ, ಭಾರತಮಾತೆಗೆ ಮುಕುಟಸದೃಶವಾಗಿರುವ ಕಾಶ್ಮೀರಕ್ಕೂ, ಕಾಶ್ಮೀರಿಗಳಿಗೂ ಆದ ಅನ್ಯಾಯ ನಮಗೆಲ್ಲರಿಗೂ ಆದ ಅನ್ಯಾಯವೇ. ಅದನ್ನು ಮನಗಂಡು ದೇಶವಾಸಿಗಳೆಲ್ಲರೂ ಕಾಶ್ಮೀರಿಗಳ ಪರ ನಿಲ್ಲಬೇಕು, ಸತ್ಯದ ಪರ ಹೋರಾಡಬೇಕು ಎಂಬ ಸಂದೇಶ ಕೊಡುತ್ತದೆ ಕಾದಂಬರಿಯ ನಾಯಕ ನರೇಂದ್ರರ ಪಾತ್ರ.

ಕಾಶ್ಮೀರ ಸಮಸ್ಯೆಯಂತಹ ಜಟಿಲವಾದ ವಿಷಯವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸಹನಾರವರು ಹಂತಹಂತವಾಗಿ ವಿವರಿಸಿದ ರೀತಿ ಬಹಳ ಇಷ್ಟವಾಯಿತು. ರಾಜಕೀಯ ಸಮಸ್ಯೆಯೊಂದಕ್ಕೆ ಮತಾಂಧತೆಯ ಇಂಬು ದೊರೆತು ಇಡೀ ಕಾಶ್ಮೀರವೇ ಸುಟ್ಟು ಬೂದಿಯಾಗುತ್ತಿರುವ ಬಗೆಯನ್ನು ಓದಿದಾಗ ಮನಸ್ಸು ವಿಹ್ವಲವಾಗದಿರದು. ಪಂಡಿತರ ಮಗಳು ಸವಿತಾಳನ್ನು ಮತಾಂಧ ಪಿಶಾಚಿಗಳು ಅಪಹರಿಸಿ, ಅತ್ಯಾಚಾರಗೈದು, ಹತ್ಯೆಗೈದ ಭಾಗವನ್ನು ಓದಿದ ಮೇಲೆ ಎರಡು ರಾತ್ರೆಗಳ ಕಾಲ ನಿದ್ದೆ ಬರದೇ ಹೊರಳಾಡಿದ್ದೆ.

ಈ ಇಸ್ಲಾಮ್ ಮೂಲಭೂತವಾದದ ಸಮಸ್ಯೆ ದೂರದ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವವೇ ಮತಾಂಧತೆಯ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದೆ. ಮುಸ್ಲಿಮರೆಲ್ಲಾ ಕೆಟ್ಟವರೆಂಬುದು ಖಂಡಿತಾ ಸರಿಯಲ್ಲ. ಆದರೆ ಬಹಳಷ್ಟು ಮುಗ್ಧ ಮುಸ್ಲಿಂ ಯುವಕ ಯುವತಿಯರು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದೂ ಸುಳ್ಳಲ್ಲ. ನಿಜವಾದ ದೇಶಪ್ರೇಮಿಗಳಾದವರು, ಅಲ್ಪಸಂಖ್ಯಾತರ ಓಲೈಕೆಯೆಂಬ ಪರದೆಯ ಹಿಂದೆ ಅಡಗಿಕೊಳ್ಳದೆ, ಸಮಸ್ಯೆಯ ಮೂಲವನ್ನರಿತು, ಸತ್ಯಾಂಶವನ್ನು ಜನರಿಗೆ ತಿಳಿಸುವ, ಮೂಲಭೂತವಾದದ ಅಪಾಯಗಳನ್ನು ಬೆಳೆಯುವ ಮನಸ್ಸುಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಶೀಘ್ರವೇ ಮಾಡಬೇಕಾಗಿದೆ. ಈ ಕೆಲಸದಲ್ಲಿ, ಕಾದಂಬರಿಯಲ್ಲಿ ಬರುವ ಪಾತ್ರಗಳಾದ ಸಲೀಂ ಹಾಗೂ ಮುಷ್ತಾಕ್ ನಂತಹ ಮುಸ್ಲಿಂ ಯುವಕರನ್ನು ಸಂಘಟಿಸಬೇಕಾದ ಅವಶ್ಯಕತೆಯಿದೆ. ಜಾತಿ, ಮತ, ಧರ್ಮ, ಭಾಷೆ ಹಾಗೂ ರಾಜ್ಯಗಳ ಎಲ್ಲೆಯನ್ನು ಮೀರಿ ನಾವೆಲ್ಲರೂ ರಾಷ್ಟ್ರಹಿತಕ್ಕಾಗಿ ಒಂದಾಗಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಇಂತಹ ಒಂದು ಪ್ರಬುದ್ಧ ಕಾದಂಬರಿಯನ್ನು ಕನ್ನಡದ ಓದುಗರ ಕೈಗಿಡಲು ಸಹನಾ ಅವರು ಪಟ್ಟ ಶ್ರಮಕ್ಕೆ, ಅವರ ಅಧ್ಯನಶೀಲತೆಗೆ ಹ್ಯಾಟ್ಸ್ ಆಫ್. ನೀವೂ ಓದಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
– ವೈಶಾಲಿ ದಾಮ್ಲೆ
ಬೋಲ್ಟನ್, ಯುಕೆ