COVID-19 ನೊಂದಿಗೆ ಭಾರತದ ಹೋರಾಟ

ಕೊರೋನಾ ವೈರಸ್ ನಿಂದ ಬಂದಿರುವ ಕೋವಿಡ್-19 (COVID-19) ಸಾಂಕ್ರಾಮಿಕ ಮಹಾಮಾರಿ ಇಂದು ವಿಶ್ವವ್ಯಾಪಿಯಾಗಿದೆ. ಚೀನಾದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ  ರೋಗಾಣುವಿಗೆ ಇಂದು ಪಾಶ್ಚಾತ್ಯ ದೇಶಗಳಲ್ಲಿ ಪ್ರತಿನಿತ್ಯ ಮೂರು ಸಾವಿರಕ್ಕೂ ಮೇಲ್ಪಟ್ಟು ಜನರು ಸಾಯುತ್ತಿದ್ದಾರೆ. ಭಾರತದಲ್ಲಿ ಈವರೆಗೆ ಸರಕಾರಕೈಗೊಂಡ ಕ್ರಮಗಳಿಂದಾಗಿ ಈ ರೋಗ ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿದೆ ಹಾಗೂ ಇದಕ್ಕೆ ಬಲಿಯಾದವರ ಸಂಖ್ಯೆ ನೂರರಷ್ಟು ಇದೆ. ಆದರೆ ಇದು ಸಾಮಾಜಿಕ, ಸಾಂಕ್ರಾಮಿಕ ಹರಡುವಿಕೆಯ ಹಂತ ತಲುಪಿದ್ದು, ಇದರಿಂದ ನಮ್ಮನ್ನು ರಕ್ಷಿಸಿಕೊಂಡು ನಮ್ಮ ಸುತ್ತಲಿನ ಜನರ ಹಾಗೂ ಇಡೀ ದೇಶವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಇದಕ್ಕಾಗಿಯೇ ನಾವು ಭಾರತದ ಸರ್ಕಾರ ಕೈಗೊಂಡ ಕ್ರಮಗಳನ್ನು ಕಠಿಣವಾಗಿ ಅನುಸರಿಸಬೇಕಾಗಿದೆ.

ಕೊರೋನಾ ವೈರಸ್ ಶ್ವಾಸಕೋಶಗಳನ್ನು ಸೇರಿ, ಉಸಿರಾಟದ ತೀವ್ರವಾದ ತೊಂದರೆ ಉಂಟಾಗಿ ವ್ಯಕ್ತಿ ಬಳಲಬಹುದು ಹಾಗೂ ರೋಗ ಉಲ್ಬಣಗೊಂಡು ಸಾಯಬಹುದು. ಸಧ್ಯಕ್ಕೆ ಇದಕ್ಕೆ ಸೂಕ್ತ ಲಸಿಕೆ ಅಥವಾ ಚಿಕಿತ್ಸೆ ಇಲ್ಲದಿರುವುದರಿಂದ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದೊಂದೇ ಇದರ ವಿರುದ್ದ ನಮಗಿರುವ ದಾರಿ.

ನಾವು ಕೆಮ್ಮುವಾಗ ಅಥವಾ ಸೀನುವಾಗ ನಮ್ಮ ಬಾಯಿ ಅಥವಾ ಮೂಗಿನಿಂದ ಸಣ್ಣ ಹನಿಗಳು ಹೊರಬಂದು, ಚದುರಿ ಹತ್ತಿರದ ವಸ್ತುಗಳ ಅಥವಾ ಮೇಲ್ಮೈ ಮೇಲೆ ಬೀಳಬಹುದು. ಇದನ್ನು ನಾವು ಅಥವಾ ಇನ್ನೊಬ್ಬ ವ್ಯಕ್ತಿ ಮುಟ್ಟಿದಾಗ ರೋಗಾಣುಗಳು ಒಂದು ಕಡೆಯಿಂದ ಇನ್ನೊಂದು ಕಡೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ.

ಇದನ್ನು ತಡೆಗಟ್ಟಲು ನಾವು ಕೆಮ್ಮುವಾಗ, ಸೀನುವಾಗ ಟಿಶ್ಯು ಪೇಪರ್ ಬಳಸಿ, ತಕ್ಷಣವೇ ಅದನ್ನು ಕಸದ ಬುಟ್ಟಿಗೆ ಎಸೆದು 20 ಸೆಕೆಂಡ್ ಸಾಬೂನಿನಿಂದ ಕೈಗಳನ್ನುಚೆನ್ನಾಗಿ ಉಜ್ಜಿ ತೊಳೆದುಕೊಳ್ಳಬೇಕು. ಇಲ್ಲವೇ, ಭುಜ ಅಥವಾ ಮೊಣಕೈ ಸಂಧಿನಲ್ಲಿ ಕೆಮ್ಮುವುದರಿಂದ ರೋಗಾಣುಗಳು ನಮ್ಮ ಕೈಯ ಮೂಲಕ ಹರಡುವುದನ್ನು ತಡೆಯಬಹುದು.

ಅನಗತ್ಯವಾಗಿ ಯಾವುದೇ ವಸ್ತುಗಳನ್ನು, ಮೇಲ್ಮೈಯನ್ನು ಮುಟ್ಟಬಾರದು. ಕಣ್ಣು, ಮೂಗು, ಬಾಯಿಯ ಮೂಲಕ ರೋಗಾಣು ಶ್ವಾಸಕೋಶಗಳನ್ನು ಸೇರುವುದನ್ನು ತಡೆಗಟ್ಟಲು ನಮ್ಮ ಮುಖವನ್ನು ಸ್ಪರ್ಶಿಸುವುದನ್ನು ಸಾಧ್ಯವಾದ ಮಟ್ಟಿಗೆ ತಡೆಯಬೇಕು.

ನಾವು ಮುಖ್ಯವಾಗಿ ಬಲಕೈಯನ್ನು ಹೆಚ್ಚಿನ ಕೆಲಸಗಳಿಗೆ ಬಳಸುತ್ತಿದ್ದಲ್ಲಿ, ಎಡಗೈಯನ್ನು ಬಾಗಿಲು ತೆರೆಯುವುದು ಇತ್ಯಾದಿಗಳಿಗೆ ಬಳಸಿದಲ್ಲಿ ವೈರಾಣು ನಮ್ಮ ಬಲಕೈಯ ಮೂಲಕ ಮುಖದ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬಹುದು. ಅದಲ್ಲದೇ, ದಿನಕ್ಕೆ ಹತ್ತು-ಹದಿನೈದು ಬಾರಿ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ಉಜ್ಜಿ ತೊಳೆದುಕೊಳ್ಳುವುದು ಅತೀ ಅಗತ್ಯ.

ಮನೆಯಲ್ಲೇ ಇದ್ದು, ಬೇರೆಯವರಿಂದ ಅನಾವಶ್ಯಕ ಸಂಪರ್ಕ ತಪ್ಪಿಸಿ ಈ ಸಾಂಕ್ರಾಮಿಕ ರೋಗವನ್ನು ನಾವು ನಮಗೆ ಬರದಂತೆ, ಹಾಗೂ ಸಮಾಜದಲ್ಲಿ ಹರಡದಂತೆ ತಡೆಗಟ್ಟಬಹುದು.

ಅತೀ ಆವಶ್ಯಕ ವಸ್ತುಗಳ ಖರೀದಿಗೆ ಹೊರಗೆ ಹೋದ ಸಂಧರ್ಭದಲ್ಲಿ, ಮತ್ತೊಬ್ಬ ವ್ಯಕ್ತಿಯಿಂದ 2 ಮೀಟರ್ ಅಂತರ ಕಾಯ್ದುಕೊಂಡು ರೋಗಾಣುಗಳ ಪ್ರಸಾರವನ್ನುತಡಯಬಹುದು.

ನಮ್ಮ ಆರೋಗ್ಯವನ್ನು ಕಾಪಾಡಿ, ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು, ಸಮಸ್ತ ಶರೀರ ಹಾಗೂ ಶ್ವಾಸಕೋಶಗಳ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಪ್ರತಿದಿನ ತಪ್ಪದೆ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲೇ ಇರುವುದರಿಂದ ಮಾನಸಿಕ ಒತ್ತಡಬರುವುದು ಸಹಜ. ಅದಕ್ಕಾಗಿ ಧ್ಯಾನ, ಸತ್ಸಂಗ, ಭಜನೆ-ಕೀರ್ತನೆ, ಉತ್ತಮ ಓದುವಿಕೆ – ಇತ್ಯಾದಿ ಅತೀ ಸಹಾಯಕ. ಸಾಮಾಜಿಕ ಜಾಲತಾಣ, ತಂತ್ರಜ್ಞಾನ ಬಳಸಿ ಬಂಧು-ಬಾಂಧವರ ಜೊತೆ ದಿನಂಪ್ರತಿ ಸಂಪರ್ಕ ಇರಿಸಿಕೊಂಡು, ಕ್ಷೇಮ-ಸಮಾಚಾರ ವಿಚಾರಿಸಿ, ಹಾಗೂ ಶುಭಚಿಂತನೆ ನಡೆಸಬೇಕು. ಸಾಧ್ಯವಾದಷ್ಟೂ ಸುಳ್ಳು ವದಂತಿಗಳಿಂದ ದೂರವಿದ್ದು, ಧನಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ವೈರಸ್ ಸೋಂಕು ತಗಲಿದರೂ ಅದನ್ನು ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೂಡಿಸಿಕೊಳ್ಳಬೇಕು.

ಸೋಂಕು ತಗಲಿದಾಗ, ಕೆಲವರು ಯಾವ ರೋಗಲಕ್ಷಣಗಳಿಲ್ಲದೆ ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಇನ್ನು ಉಳಿದವರಲ್ಲಿ, ವಿಪರೀತ ಒಣ ಕೆಮ್ಮು ಅಥವಾ ಅತೀ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ಮನೆಮಂದಿಯಿಂದ ದೂರವಿರಿ ಹಾಗೂ ವೈದ್ಯಕೀಯ ಸಹಾಯ ಪಡೆಯಿರಿ. ಈ ಸಂಧರ್ಭದಲ್ಲಿ  ರೋಗ ಲಕ್ಷಣ ಇದ್ದವರು ಮಾಸ್ಕ್ ಬಳಸಿ ಮುಖ ಮುಚ್ಚಿಕೊಳ್ಳುವುದು ಸೂಕ್ತ.

ಒಟ್ಟಿನಲ್ಲಿ, ಶಾರೀರಿಕ ಹಾಗೂ ಮಾನಸಿಕ ಸಂತುಲನ ಕಾಪಾಡಿಕೊಳ್ಳುವುದು, ಸ್ವಚ್ಛತೆಯ ಬಗ್ಗೆ ಕಾಳಜಿ, ಸಾಮಾಜಕ ಅಂತರ ಕಾಪಾಡಿಕೊಳ್ಳುವುದು, ರೋಗ ಲಕ್ಷಣಗಳುಕಾಣಿಸಿಕೊಂಡಲ್ಲಿ ತಮ್ಮನ್ನು ಇತರರಿಂದ ಪ್ರತ್ಯೇಕಿಸಿಕೊಂಡು, ಯೋಗ್ಯ ಆರೋಗ್ಯ ಸಲಹೆಯನ್ನು ಪಡೆದುಕೊಳ್ಳುವುದು – ಇವಿಷ್ಟು ನಾವು ಕೊರೋನಾ ವೈರಸ್ ನಿಂದನಮ್ಮ ವೈಯಕ್ತಿಕ, ಕುಟುಂಬದ ಹಾಗೂ ನಮ್ಮ ಸಮಾಜದ ರಕ್ಷಣೆಗಾಗಿ ಮಾಡಲೇಬೇಕಾದ ಅಂಶಗಳು. ಮನೆಯಲ್ಲೇ ಇರಿ, ಸರಕಾರದ ವೈದ್ಯಕೀಯ ಸೂಚನೆಗಳನ್ನುತಪ್ಪದೆ ಪಾಲಿಸಿ!

Leave a Reply

Your email address will not be published. Required fields are marked *