ಕಹೋ – ಸ್ವಾಮಿ ವಿವೇಕಾನಂದರ ಜೀವನ ದರ್ಶನ ಚಕ್ರವರ್ತಿ ಸೂಲಿಬೆಲೆಯಿಂದ

Audience in London

ಸ್ವಾಮಿ ವಿವೇಕಾನಂದ ಅವರ ಚಿಕಾಗೊ ನಲ್ಲಿ ನೀಡಿದ ಪ್ರಖ್ಯಾತ ಭಾಷಣದ ೧೨೫ ನೇ ವರ್ಷದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿತ್ತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಕರ್ನಾಟಕದುದ್ದ ತಮ್ಮ ನೇರ ನುಡಿ, ಯುವ ಜನತೆಯಲ್ಲಿ ದೇಶ ಪ್ರೇಮದ ಬೀಜ ಬಿತ್ತುವ ಭಾಷಣದಿಂದ ಎಲ್ಲರ ಗಮನ ಸೆಳೆಯುತ್ತಿದ್ದುದು ನಿಜ ಆದರೆ ೨೦೧೨ ರಲ್ಲಿ ನಾನು ಕಲಿತ ಜವಾಹರ ನವೋದಯ ವಿದ್ಯಾಲಯ, ಉತ್ತರ ಕನ್ನಡ ಶಾಲೆಯ ಬೆಳ್ಳಿ ಮಹೋತ್ಸವದ ದಿನ ಅವರು ನೀಡಿದ ಭಾಷಣ ಕೇಳಿದ್ದು ಬಿಟ್ಟರೆ ನಾನು ಅಷ್ಟೇನೂ ನಿಕಟವಾಗಿ ಅವರ ವೀಡಿಯೋಸ್ ಅಥವಾ ಪತ್ರಿಕಾ ಮಾದ್ಯಮದಲ್ಲಿ ವಿಶೇಷವಾಗಿ ಅನುಸರಿಸುತ್ತಾ ಇರಲಿಲ್ಲ. ಹೀಗಾಗಿ ಕಹೋ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಹಾಗೂ ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಕೇಳುವ ಕುತೂಹಲ ನನ್ನಲ್ಲಿ ಸಾಕಷ್ಠಿತ್ತು. ಹಲವಾರು ಲಂಡನ್ ಕನ್ನಡಿಗರು ಅವರನ್ನು ಕೇಳುವ ಕುತೂಹಲದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಭಾವಿಸಿರುತ್ತೇನೆ.
ಚಕ್ರವರ್ತಿ ಸೂಲಿಬೆಲೆ ಅವರನ್ನು ಸಭಾಂಗಣದತ್ತ ಬರಮಾಡಿಕೊಳ್ಳಲು ಮಿತ್ರರಾದ ಸಂತೋಷ್ ಪಾಟೀಲ್ ಕೇಳಿದಾಗ ಹೂ ಅಂದೆ… ಚಕ್ರವರ್ತಿ ಅವರು ಕಾರ್ ನಿಂದ ಇಳಿದಾದಮೇಲೆ, ನಾನು ಗಣಪತಿ ಭಟ್ ಎಂದು ಸ್ವ – ಪರಿಚಯ ಮಾಡಿ ಕೊಡುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ.

ಯು.ಕೆ. ಕನ್ನಡ ಸಮೂದಾಯ ಮೊನ್ನೆ ತಾನೇ ದುರಾದ್ರಷ್ಟದಿಂದ ಕಳೆದುಕೊಂಡ ಪವನ್ ಮೈಸೂರ್ ಅವರಿಗೆ ಶ್ರದ್ದಾಂಜಲಿ ಹಾಗೂ ಮೌನಾಚರಣೆಯ ಮೂಲಕ ಕಾರ್ಯಕ್ರಮ ಶುರುವಾಯಿತು. ದಿನದ ಸಂಪೂರ್ಣ ಕಾರ್ಯಕ್ರಮವನ್ನು ರಾಹುಲ್ ಹಾಗೂ ರಂಗನಾಯಕಿ ನೆರವೇರಿಸಿ ಕೊಟ್ಟರು. ಸಾಮರಸ್ಯದ ನವ್ಯ ಯುಗಕ್ಕೆ ನಿಮಗಿದೋ ಆಮಂತ್ರಣ ಎಂಬ ಸುಂದರ ಹಾಡಿನೊಂದಿಗೆ ಕಾರ್ಯಕ್ರಮ ಮುಂದುವರೆದು, ಸ್ವಾಗತ ಭಾಷಣ, ಅತಿಥಿಗಳಿಂದ ದೀಪ ಹಚ್ಚುವ ಕಾರ್ಯಕ್ರಮ ಹಾಗೂ ಕಹೋ (ಕರುನಾಡಿನ ಅನಿವಾಸಿಗಳ ಹಿಂದೂ ಒಕ್ಕೂಟ) ದ ಅಧಿಕೃತ ಘೋಷಣೆಯೊಂದಿಗೆ ಚಕ್ರವರ್ತಿ ಸೂಲಿಬೆಲೆಯವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಅನಿವಾಸಿ ಪದದ ಗುಣಗಾನದಿಂದ ಚಕ್ರವರ್ತಿ ಸೂಲಿಬೆಲೆ ತಮ್ಮ ಭಾಷಣವನ್ನು ಶುರು ಮಾಡಿದರು. ಅ ವಿನಾಶಿ ಹಿಂದುಗಳ ಸಂಘಟನೆಯಾಗಿ ಕಹೊ (KAHO) ವಿಜ್ರಂಭಿಸಲಿ ಎಂದು ಹಾರೈಸಿದರು. ಸ್ವಾಮಿ ವಿವೇಕಾನಂದರ ಬಗ್ಗೆ ಚಿಕ್ಕವನಿರುವಾಗ ಶಾಲೆಯಲ್ಲಿ ಓದಿದ್ದು ಬಿಟ್ಟರೆ ವಿಕಿಪೀಡಿಯದಲ್ಲಿ ಹೆಚ್ಚಿನದಾಗಿ ಸರ್ಚ್ ಮಾಡಿ ತಿಳಿದಿರುವಂತಹ ವಿಷಯ. ಆದರೆ ಚಕ್ರವರ್ತಿ ಸೂಲಿಬೆಲೆ ಸ್ವಾಮಿ ವಿವೇಕಾನಂದರ ಆರಂಭಿಕ ಜೀವನದಿಂದ ಹಿಡಿದು ಅವರ ಪ್ರತಿಯೊಂದು ಹೆಜ್ಜೆ, ಮಾತು ನುಡಿಯನ್ನು ಆಳವಾಗಿ ಸಂಶೋಧನೆ ಮಾಡಿ, ಕಲಿಯುಗದಲ್ಲಿ ನಾವು ಹಿಂದೂ ಧರ್ಮವನ್ನು ಹೇಗೆ ನಿಭಾಯಿಸಬೇಕು ಎಂಬ ಮಹತ್ವವನ್ನು ಅವರ ವಾಕ್ ಚಾತುರ್ಯದಿಂದ ಎಲ್ಲರಿಗೂ ಅರಿವು ಮಾಡಿಕೊಟ್ಟಿದ್ದು ಅವರ ಭಾಷಣದ ವಿಶೇಷತೆ. ಸುಮಾರು ಒಂದೂವರೆ ಘಂಟೆ ನಡೆದ ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಉಪಸ್ಥಿತರಿದ್ದ ಎಲ್ಲಾ ಕನ್ನಡಿಗರೂ ಮೂಕ ಮಗ್ನರಾಗಿ ಆಲಿಸಿದರು.

Balagokulam Children Session

ಅವರ ಭಾಷಣದ ಒಂದು ವಿಚಾರ ನನ್ನನ್ನು ಸರಿಯಾಗಿ ತಟ್ಟಿತು. ಅದೇನೆಂದರೆ “ನಿನ್ನನ್ನು ನೀನು ತಿಳಿಕೊಂಡರೆ ಜಗತ್ತಿನಲ್ಲಿ ಮತ್ತೇನೂ ತಿಳಿದುಕೊಳ್ಳುವ ಅಗತ್ಯವಿಲ್ಲ” ಹೀಗಾಗಿ ಸ್ವಾಮಿ ವಿವೇಕಾನಂದರು ಚಿಕ್ಕವರಿವಾಗಲೇ ಈ ಚಿಂತನೆ ಅವರಿಗೆ ಬಹಳ ಬೇಗ ಬಂತು ಎಂದು ನಮಗೆಲ್ಲ ಅರಿವು ಮಾಡಿಕೊಟ್ಟಿದ್ದು ಸೂಕ್ತವಾಗಿತ್ತು. ಇದರ ಬಗ್ಗೆ ವಿಶ್ಲೇಷಣೆ ಮಾಡಿ ತಕ್ಕ ಉದಾಹರಣೆ ಕೊಟ್ಟು ಚಕ್ರವರ್ತಿ ಸೂಲಿಬೆಲೆಯವರು ಸುಂದರವಾಗಿ ಎಲ್ಲರಲ್ಲೂ ವಿವೇಕಾನಂದರ ಆದರ್ಶ ಹಾಗೂ ಅವರ ದೇಶ ಭಕ್ತಿಯ ಬಗ್ಗೆ  ಅರಿವು ಮಾಡಿಕೊಟ್ಟರು. ಹಿಂದೂ ಧರ್ಮದ ಬಗ್ಗೆ ಇತ್ತೀಚಿಗೆ ಅನುಕೂಲಕ್ಕೆ ತಕ್ಕಂತೆ ತಮ್ಮ ಹುಚ್ಚು ರಾಜಕಾರಣಕ್ಕೆ ಉಪಯೋಗಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ನಾವು Asertive ಆಗಿರಬೇಕು ಎಂಬುದರ ಬಗ್ಗೆ ಅರಿವು ಮಾಡಿಕೊಟ್ಟಿದ್ದು ಶ್ಲಾಘನೀಯ. ಪ್ರೇಕ್ಷಕರ ಸಾಕಷ್ಟು ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರ ನೀಡಿದ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮ ಮುಗಿದು, ತಿಂಡಿ ಉಪಚಾರ ಮುಗಿದು, ಸಭಾಂಗಣದ ಬಾಗಿಲು ಮುಚ್ಚುವವರೆಗೂ ಜನರು ತಮ್ಮನ್ನು ಹಿಂಬಾಲಿಸಿ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸಿದರು.
ಶೋಭಾ ಸಾಗರ್ ಹಾಗೂ ತಂಡದಿಂದ ವಂದೇ ಮಾತರಂ ಗೀತೆಯೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮ, ಮುಂದೆ ಇಂತಹ ಬೌದ್ಧಿಕ ವಿಷಯಗಳ ಮೇಲೆ ಇನ್ನಷ್ಟು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಆಯೋಜಕರನ್ನು ಉತ್ತೇಜಿಸುವದಂತೂ ಖಚಿತ.
ಕಾರ್ಯಕ್ರಮದ ಯಶಸ್ಸಿಗೆ ಒಟ್ಟೊಗೂಡಿದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಪ್ರಯೋಜಕರಿಗೆ ನನ್ನ ಧನ್ಯವಾದವನ್ನು ಕೋರಿ ಮುಂದೆ ಕೂಡ ಹೀಗೆಯೇ ಉತ್ತಮ ಚಿಂತಕರಿಂದ ಯು.ಕೆ ಯಲ್ಲಿ ನೆಲೆಸಿರುವ ಕನ್ನಡಿಗರಗೆ ಕೇಳುವ ಅವಕಾಶ ದೊರೆಯಲಿ ಎಂದು ಆಶಿಸುವೆ.

Article by Gana Bhat, United Kingdom

http://www.ganabhat.com